ಬಾಸಫ್, ನೀಕೊಲೈ ಜೆನೆಡೀಯವಿಚ್
	1922. ರಷ್ಯಾದೇಶದ ಭೌತ ವಿಜ್ಞಾನಿ. ವೊರೆನೆಜ್ ಎಂಬಲ್ಲಿ 1922 ಡಿಸೆಂಬರ್ 14ರಂದು ಜನನ. 1950ರಲ್ಲಿ ಮಾಸ್ಕೊ ಇನ್‍ಸ್ಟಿಟ್ಯೂಟಿನಿಂದ ಪದವೀಧರನಾದ. 1951ರಿಂದ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯ. 1966ರಲ್ಲಿ ಯುಎಸ್‍ಎಸ್‍ಆರ್ ಅಕಾಡೆಮಿ ಆಫ್ ಸೈನ್ಸ್‍ನ ಅಕಾಡೆಮಿಯನ್ ಆದ. 1967ರಿಂದ ಅದರ ಪ್ರೆಸಿಡಿಯಮ್ಮಿನ ಸದಸ್ಯ. 1969ರಲ್ಲಿ ಸೋಷಿಯಲಿಸ್ಟ್ ಲೇಬರಿನ ಗಣ್ಯ ವ್ಯಕ್ತಿ ಬಿರುದು ಪಡೆದ.

	ಈತನ ಸಂಶೋಧನ ಕ್ಷೇತ್ರ ಕ್ವಾಂಟಮ್ ಭೌತವಿಜ್ಞಾನ. ಕ್ವಾಂಟಮ್ ವ್ಯವಸ್ಥೆಗಳ ಮೂಲಕ ವಿದ್ಯುತ್ಕಾಂತೀಯ ಅಂದೋಲನಗಳನ್ನು ಉತ್ಪಾದಿಸಲು ಮೂಲಭೂತವಾದ ಒಂದು ವಿಧಾನವನ್ನು ಈತ ಪ್ರಖೊರೊವ್ ಎಂಬ ವಿಜ್ಞಾನಿಯ ಜೊತೆಗಿನ ಸಹಯೋಗದಿಂದ ಶೋಧಿಸಿದ. ಅಮೊನಿಯಾ ಅಣುಗಳನ್ನೊಳಗೊಂಡ ಒಂದು ದಂಡವನ್ನು ಉಪಯೋಗಿಸಿ (ಮಾಲಿಕ್ಯುಲರ್ ಜನರೇಟರ್-ಆಣವಿಕಜನಕ) ಮೇಸರ್ ಎಂಬ ಒಂದು ಆಣವಿಕ ಜನಕವನ್ನು ಮೊತ್ತಮೊದಲಿಗೆ ಉಪಜ್ಞಿಸಿದ. ಲೇಸರ್ ಎಂಬ ಹೆಸರಿನ ಕ್ವಾಂಟಮ್ ದ್ಯುತಿಪಟ್ಟಿ ಜನಕಗಳಿಗೆ (ಕ್ವಾಂಟಮ್ ಆಪ್ಟಿಕಲ್ ಲ್ಯಾಂಡ್ ಜನರೇಟರ್ಸ್) ಅರ್ಧವಾಹಕಗಳನ್ನು ಬಳಸಬಹುದು ಎಂಬ ಅಭಿಪ್ರಾಯ ಕೊಟ್ಟವನೇ ಈತ. ಅಲ್ಲದೆ ವಿವಿಧ ರೀತಿಯ ಅರ್ಧವಾಹಕಗಳ ಲೇಸರುಗಳನ್ನು ಹೇಗೆ ಉತ್ಪಾದಿಸಬಹುದು ಎಂಬುದನ್ನೂ ಶೋಧಿಸಿದ್ದಾನೆ. ಏಕಕಾಲಿಕಗತಿಯ ತುಡಿತಗಳನ್ನು ಹೊರಚೆಲ್ಲುವ ಮಾಣಿಕ್ಯ ಮತ್ತು ನಿಯೊಡಿಮಿಯಮ್-ಗಾಜು ಲೇಸರುಗಳ ಸಿದ್ಧಾಂತದ ಬಗ್ಗೆ ಈತ ಗಮನಾರ್ಹ ವಿಷಯಗಳನ್ನು ಆವಿಷ್ಕರಿಸಿದ್ದಾನೆ. ಹಾಗೆಯೇ ಕ್ವಾಂಟಮ್ ಆವರ್ತಾಂಕ ಆದರ್ಶಗಳನ್ನು ಸೃಷ್ಟಿಸುವುದು ಹೇಗೆ, ದ್ರವ್ಯ ಮತ್ತು ಅತಿ ಪ್ರಬಲ ವಿಕಿರಣಗಳ ನಡುವೆ ಉಂಟಾಗುವ ಪ್ರತಿಕ್ರಿಯೆ-ಇವೆಲ್ಲದರ ಬಗೆಗೆ ತೀವ್ರ ಸಂಶೋಧನೆ ನಡೆಸಿದ್ದಾನೆ. ಈ ಕೆಲಸಗಳ ಪರಿಣಾಮವಾಗಿ ಈತನಿಗೆ 1959ರಲ್ಲಿ ನಿನ್ ಬಹುಮಾನವೂ 1964ರಲ್ಲಿ ನೊಬೆಲ್ ಪಾರಿತೋಷಿಕವೂ ದೊರೆತವು.													(ಸಿ.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ